`ಬ್ಲಿಂಕ್` ನೋಡ್ತಾರೆ ಶಿವಣ್ಣ....ಹೊಸಬರ ಬೆನ್ನು ತಟ್ಟಬೇಕು ಪ್ರೇಕ್ಷಕರು ಎಂದ ಕರುನಾಡ ಚಕ್ರವರ್ತಿ
Posted date: 13 Wed, Mar 2024 08:29:04 AM
ಬ್ಲಿಂಕ್ ಹೊಸಬರ ಚಿತ್ರ. ಹಾಗೆಂದ ಮಾತ್ರಕ್ಕೆ ಇದು ಮಾಮೂಲಿ ಚಿತ್ರವಲ್ಲ. ಬದಲಿಗೆ ಹೊಸಬರ ವಿಭಿನ್ನ ಪ್ರಯತ್ನದ ಸಿನಿಮಾ. ಇಂತಹ ತಂಡಗಳನ್ನು ಪ್ರೇಕ್ಷಕ ಬೆನ್ನು ತಟ್ಟುಬೇಕು ಎಂದಿದ್ದಾರೆ ಶಿವಣ್ಣ.
 
ಬ್ಲಿಂಕ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಕೇಳುತ್ತಿರುವ ಹಿನ್ನೆಲೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಶಿವಣ್ಣ, ಬ್ಲಿಂಕ್ ಚಿತ್ರದ ಬಗ್ಗೆ ತುಂಬಾ ಕೇಳ್ತಾ ಇದೀನಿ. ಆದಷ್ಟು ಬೇಗ ನೋಡ್ತೀನಿ. ಹೀಗೆ ಹೊಸ ಪ್ರಯತ್ನಕ್ಕೆ ಪ್ರೇಕ್ಷಕರು ಬೆನ್ನು ತಟ್ಟಿದಾಗ ರಂಗಿತರಂಗ, ಉಳಿದವರು ಕಂಡಂತೆ, ಗೋಧಿ ಬಣ್ಣ ಸಾಧಾರಣ ಮೈ ಕಟ್ಟು, ಹೀಗೆ ಎಷ್ಟೋ ಚಿತ್ರಗಳು ಗೆಲ್ಲೋದಕ್ಕೆ ಸಾಧ್ಯವಾಯಿತು. ಈ ಹೊಸ ತಂಡ ತಮ್ಮ ಶಕ್ತಿ ಮೀರಿ ಪ್ರಯತ್ನಪಟ್ಟಿದೆ. ಥಿಯೇಟರ್ ಗೆ ಬಂದು ಬ್ಲಿಂಕ್ ಚಿತ್ರವನ್ನು ನೋಡಿ ಎಂದು ಬರೆದುಕೊಂಡಿದ್ದಾರೆ.
 
ಬ್ಲಿಂಕ್ ಸಿನಿಮಾ ಮಲಯಾಳಂನಲ್ಲಿ ಬಂದಿದ್ರೆ ಕನ್ನಡಿಗರೆಲ್ಲಾ ಈ ಚಿತ್ರ ನೋಡ್ತಾ ಇದ್ರು... ಆದ್ರೆ ಇದು ಕನ್ನಡ ಸಿನೆಮಾ ಅದಕ್ಕೆ ಯಾರೂ ನೋಡುತ್ತಿಲ್ಲ ಅಂತಾ ನಿರ್ದೇಶಕ ಸಿಂಪಲ್ ಸುನಿ ಖಾರವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
 
ಹೊಸಬರು ಚಿತ್ರರಂಗಕ್ಕೆ ಬಂದಾಗ ಹೊಸತನವನ್ನು ಹೊತ್ತು ಬರುತ್ತಾರೆ  ಎಂಬುದಕ್ಕೆ ‘ಬ್ಲಿಂಕ್​’ ಸಿನಿಮಾ ಉತ್ತಮ ಉದಾಹರಣೆ.  ಟೈಮ್​ ಟ್ರಾವೆಲಿಂಗ್​ನ ಕಹಾನಿಯನ್ನು ತೆರೆದಿಡುವ ಈ ಚಿತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. 
 
ಮಾರ್ಚ್ 8ರಂದು ಕರಟಕ ದಮನಕ ಹಾಗೂ ರಂಗನಾಯಕದಂತಹ ದೊಡ್ಡ ಸ್ಟಾರ್ಸ್ ಸಿನಿಮಾಗಳ ಜೊತೆಯಲ್ಲಿ ತೆರೆಗೆ ಬಂದ ಸಿನಿಮಾ ಬ್ಲಿಂಕ್. ಈ ಚಿತ್ರದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬ್ಲಿಂಕ್ ಸಿನಿಮಾ ನೋಡಿದ ಪ್ರತಿಯೊಬ್ಬರು ಮನಸಾರೆ ಕೊಂಡಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ನೋಡಿ ಇಷ್ಟವಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೂ ಚಿತ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರ ಬೆಂಬಲ ಸಿಗುತ್ತಿಲ್ಲ. 
 
ಬ್ಲಿಂಕ್ ಸಿನಿಮಾಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿರುವ ಹಿನ್ನೆಲೆ ನಿರ್ದೇಶಕ ಸುನಿ ಥಿಯೇಟರ್ ಗೆ ಹಾಜರಿ ಹಾಕಿ ಚಿತ್ರ ವೀಕ್ಷಿಸಿದ್ದಾರೆ. ‌ಬ್ಲಿಂಕ್ ಸಿನಿಮಾ ನೋಡ್ದೆ. ಚಿತ್ರತಂಡ ನನ್ನನ್ನು ಆಹ್ವಾನಿಸಲಿಲ್ಲ. ನಾನು ಸಾಮಾನ್ಯ ಪ್ರೇಕ್ಷಕನಾಗಿಯೇ ಬಂದು ಸಿನಿಮಾ ವೀಕ್ಷಿಸಿದೆ. ಅಷ್ಟರ ಮಟ್ಟಿಗೆ ಸಿನಿಮಾ ಬಗ್ಗೆ ಒಳ್ಳೆಯ ರಿಪೋರ್ಟ್ ಇತ್ತು. ಸಿನಿಮಾ ನೋಡಿದ ಮೇಲೆ ಇಷ್ಟವಾಯಿತು. ಮಲ್ಟಿಪ್ಲೆಕ್ಸ್‌ಗಳಲ್ಲಿ ಇರುವ 10, 20 `ಬ್ಲಿಂಕ್` ಚಿತ್ರದ ಶೋಗಳು 100, 200 ಶೋಗಳು ಆಗಬೇಕು. ನೀವೆಲ್ಲಾ ಹೋಗಿ ಸಿನಿಮಾ ನೋಡಲೇಬೇಕು. `ಒಂದು ಸರಳ ಪ್ರೇಮಕಥೆ` ನೋಡದೇ ಇದ್ದರೂ ಪರವಾಗಿಲ್ಲ ಈ ಸಿನಿಮಾ ನೋಡಿ" ಎಂದು ನಿರ್ದೇಶಕ ಸುನಿ ಮನವಿ ಮಾಡಿದ್ದಾರೆ.

ಸಿಂಪಲ್ ಸುನಿ ಮಾತ್ರವಲ್ಲ ನಟ ನವೀನ್ ಶಂಕರ್ ಹಾಗೂ‌ ನಟಿ ಬೃಂದಾ ಆಚಾರ್ ಸೇರಿದಂತೆ ಹಲವಾರು ಕನ್ನಡ ತಾರೆಯರು ಬ್ಲಿಂಕ್ ಗೆ ಬಹುಪರಾಕ್ ಎನ್ನುತ್ತಿದ್ದಾರೆ. 
 
ಶ್ರೀನಿಧಿ ಬೆಂಗಳೂರು ನಿರ್ದೇಶನದ `ಬ್ಲಿಂಕ್` ಚಿತ್ರಕ್ಕೆ ರವಿಚಂದ್ರ ಎ. ಜೆ ಬಂಡವಾಳ ಹೂಡಿದ್ದಾರೆ. ದೀಕ್ಷಿತ್ ಶೆಟ್ಟಿ, ಚೈತ್ರಾ ಆಚಾರ್, ಗೋಪಾಲ ದೇಶಪಾಂಡೆ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. 

ವಿದೇಶದಲ್ಲಿ ಬ್ಲಿಂಕ್ ದರ್ಶನ

ಬ್ಲಿಂಕ್ ಸಿನಿಮಾವನ್ನು ವಿದೇಶದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಹೊರಟಿದೆ. ಯುಕೆ, ಯೂರೋಪ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಯುಎಸ್, ಸಿಂಗಾಪುರ್, ಮಲೇಷಿಯಾ, ಜರ್ಮನ್, ಐರ್ಲೆಂಡ್‌‌, ಕೆನಡಾ, ಫ್ರಾನ್ಸ್ ಸೇರಿದಂತೆ ಹಲವು ದೇಶಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಡ್ರೀಮ್ ಸ್ಕ್ರೀನ್ ಇಂಟರ್ ನ್ಯಾಷನಲ್ ಹೊರದೇಶಗಳಿಗೆ ಬ್ಲಿಂಕ್ ಚಿತ್ರ ರಿಲೀಸ್ ಮಾಡುತ್ತಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed